ಮೊಲ್ಡಾವಿಯ
ಇದನ್ನು ಮೊಲ್ಡಾವಿಯ ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್ ಎಂದು ಗುರುತಿಸಲಾಗಿದೆ. ಸೋವಿಯತ್ ಸಮಾಜವಾದಿ ಗಣರಾಜ್ಯ ಒಕ್ಕೂಟದ 15 ರಾಜ್ಯಗಳ ಪೈಕಿ ಅತ್ಯಂತ ಚಿಕ್ಕ ರಾಜ್ಯ. ಒಕ್ಕೂಟ ನೈಋತ್ಯ ಭಾಗದಲ್ಲಿರುವ ಈ ರಾಜ್ಯದ ಪೂರ್ವ ಹಾಗೂ ದಕ್ಷಿಣದಲ್ಲಿ ಉಕ್ರೇನ್ ಮತ್ತು ಪಶ್ಚಿಮದಲ್ಲಿ ರೂಮೇನೀಯ ಇವೆ. ಈ ರಾಜ್ಯ ಹಿಂದಿನ ಮೊಲ್ಡಾವಿಯನ್ ಸ್ವತಂತ್ರ ಸೋವಿಯತ್ ಸಮಾಜವಾದಿ ಗಣರಾಜ್ಯದ ಕೆಲವು ಭಾಗಗಳು ಮತ್ತು ಮೊಲ್ಡಾವಿಯನ್ನರು ಹೆಚ್ಚಾಗಿರುವ ಬೆಸ್ಸರಾಬಿಯದ ಭಾಗಗಳು ಸೇರಿ ರೂಪುಗೊಂಡಿದೆ. ಇದರ ವಿಸ್ತೀರ್ಣ 33.700 ಚಕಿಮೀ. ಜನಸಂಖ್ಯೆ 40,40,000 (1997). ರಾಜಧಾನಿ ಕಿಷಿನೇವ್.

ಮೊಲ್ಡಾವಿಯ, ನೀಸ್ಟರ್ ಮತ್ತು ಪ್ರೂಟ್ ನದಿಗಳ ಜಲಾಯನ ಪ್ರದೇಶದಿಂದ ಕೂಡಿದೆ. ನೀಸ್ಟರ್ ಉತ್ತರದ ಗಡಿಯಾಗಿ ಉಕ್ರೇನ್ ಪ್ರದೇಶವನ್ನು ಬೇರ್ಪಡಿಸಿದೆ. ಪ್ರೂಟ್ ನದಿ ಗಡಿಯಾಗಿ ರೂಮೇನೀಯವನ್ನು ವಿಂಗಡಿಸಿದೆ. ಇವೆರಡರ ನಡುವೆ ಬೆಸ್ಸರಾಬಿಯನ್ ಗುಡ್ಡಗಾಡು ಪ್ರದೇಶವಿದೆ. ಇವೆರಡು ನದಿಗಳು ಮತ್ತು ಇವುಗಳ ಉಪನದಿಗಳು ಈ ಪ್ರದೇಶದ ಆಳವಾದ ಮತ್ತು ಇಕ್ಕಟ್ಟಾದ ಕಣಿವೆಗಳಲ್ಲಿ ಹರಿಯುತ್ತವೆ.

 	ಮೊಲ್ಡಾವಿಯದ ಉತ್ತರಭಾಗ ಕಾಡುಗಳಿರುವ ಸ್ಟೆಪ್ಸ್ ವಲಯದಲ್ಲಿದೆ. ದಕ್ಷಿಣಭಾಗ ಬೆಂಗಾಡು ಬಯಲು ಪ್ರದೇಶ. ಇಲ್ಲಿಯ ಕಾಡುಪ್ರದೇಶ ಹಾಗೂ ಹುಲ್ಲುಗಾವಲನ್ನು ಕೃಷಿಯ ಉದ್ದೇಶಕ್ಕಾಗಿ ನಾಶಪಡಿಸಲಾಗಿದೆ. ಈಗ ಇಲ್ಲಿಯ ಒಟ್ಟು ಭೂಭಾಗದಲ್ಲಿ ಅರಣ್ಯವಿರುವುದು ಶೇಕಡಾ 6 ರಷ್ಟು ಮಾತ್ರ. ಈ ಕಾಡುಗಳಲ್ಲಿ ಪಶ್ಚಿಮ ಯುರೋಪಿನಲ್ಲಿ ಕಂಡುಬರುವ ಎಲೆ ಉದುರುವ ಜಾತಿಯ ಗಿಡಗಳೇ ಹೆಚ್ಚು.

 	ಮೊಲ್ಡಾವಿಯದ ಹವೆ ರಷ್ಯದಲ್ಲಿಯೇ ಅತ್ಯಂತ ಹಿತಕಾರವಾದದ್ದು. ಜನವರಿ ತಿಂಗಳಿನಲ್ಲಿ ಸರಾಸರಿ ಉಷ್ಣತೆ ದಕ್ಷಿಣ ಭಾಗದಲ್ಲಿ 30 ಅ . ಉತ್ತರ ಭಾಗದಲ್ಲಿ 50 ಅ . ಚಳಿಗಾಲದಲ್ಲಿ ಕಪ್ಪು ಸಮುದ್ರದಲ್ಲುಂಟಾದ ಇಳಿತಗಳು ಇಲ್ಲಿಯ ಹವೆಯ ಮೇಲೆ ಪ್ರಭಾವ ಬೀರುತ್ತವೆ. ಚಳಿಗಾಲದಲ್ಲಿ ಮಂಜುಗಡ್ಡೆ ದ್ರವೀಕರಣ ಆಗುವುದುಂಟು. ಜುಲೈ ತಿಂಗಳಿನಲ್ಲಿ ಸರಾಸರಿ ಉಷ್ಣತೆ ದೇಶದ ಉತ್ತರದಲ್ಲಿ 200 ಅ , ದಕ್ಷಿಣದಲ್ಲಿ 230ಅ . ವಾರ್ಷಿಕ ಮಳೆ ಉತ್ತರದಲ್ಲಿ ಸು. 215 ಸೆಂ.ಮೀ. ದಕ್ಷಿಣದಲ್ಲಿ 122 ಸೆಂ.ಮೀ.
ಮೊಲ್ಡಾವಿಯ ಭೂಮಿ ಕೃಷಿ ಯೋಗ್ಯವಿದ್ದು ಒಳ್ಳೆಯ ಹವೆಯಿರುವುದರಿಂದ ಗ್ರಾಮವಾಸಿಗಳ ಸಂಖ್ಯೆ ಹೆಚ್ಚು. ಇಲ್ಲಿ ಸಾಮಾಜಿಕ ಭದ್ರತೆ, ಜೀವನಮಟ್ಟ ಹಾಗೂ ಸಾರ್ವಜನಿಕ ಸೇವಾ ಸೌಲಭ್ಯಗಳು ದಿನೇ ದಿನೇ ಉತ್ತಮಗೊಳ್ಳುತ್ತಿದ್ದರು ಮೊಲ್ಡಾವಿಯ ರಷ್ಯದ ಅತ್ಯಂತ ಹಿಂದುಳಿದ ಗಣರಾಜ್ಯಗಳಲ್ಲೊಂದು. ಇಲ್ಲಿಯ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 63.9 ಮೊಲ್ಡವಿಯನ್ನರೂ ಶೇಕಡಾ 14.2 ಉಕ್ರೇನಿಯನ್ನರೂ ಶೇಕಡಾ 12.8 ರಷ್ಯನ್ನರೂ ಶೇಕಡಾ 3.5 ಗಾಗಜಿಯನ್ನರೂ ಶೇಕಡಾ 2 ಯಹೂದಿಗಳೂ ಇದ್ದಾರೆ. ಕಿಷಿನೇವ್ (ಜನಸಂಖ್ಯೆ 6,63,000) ಟೆರಾಸ್ಟೊಲ್ (ಜನಸಂಖ್ಯೆ 1,54,000), ಬೆಲ್ಟ್‍ಸೀ (ಜನಸಂಖ್ಯೆ 1,39,000) ಮತ್ತು ಬೆಂಡರೀ (ಜನಸಂಖ್ಯೆ 1,14,000) ಇಲ್ಲಿಯ ಮುಖ್ಯ ಪಟ್ಟಣಗಳು. ಮೊಲ್ಡಾವಿನ ಪ್ರದೇಶವನ್ನು 36 ಗ್ರಾಮೀಣ ಪ್ರಾಂತ್ಯಗಳಾಗಿ ವಿಂಗಡಿಸಿದ್ದು ಇದರಲ್ಲಿ 21 ಪಟ್ಟಣಗಳು ಮತ್ತು 45 ನಾಗರಿಕ ವಸಾಹತುಗಳು ಇವೆ. ಇಲ್ಲಿ 1978ರ ಏಪ್ರಿಲ್‍ನಲ್ಲಿ ಹೊಸ ರಾಜ್ಯಾಂಗವನ್ನು ಅಂಗೀಕರಿಸಲಾಯಿತು. 1985 ರಲ್ಲಿ ಚುನಾಯಿತವಾದ ಸುಪ್ರೀಮ್ ಸೋವಿಯತ್‍ನಲ್ಲಿ 380 ಡೆಪ್ಯೂಟಿಗಳಿದ್ದು ಅವರ ಪೈಕಿ 138 ಮಹಿಳೆಯರು, 253 ಕಮ್ಯೂನಿಸ್ಟ್‍ರು ಇದ್ದರು. ಮೊಲ್ಡಾವಿನ್ ಅಕಾಡೆಮಿ ಆಫ್ ಸೈನ್ಸ್ 1961 ರಲ್ಲಿ ಕಿಷಿನೇವ್ ಸ್ಥಾಪಿತವಾಯಿತು. ಈ ರಾಜ್ಯದಲ್ಲಿ 40ಕ್ಕೂ ಹೆಚ್ಚು ಸಂಶೋಧನಾಕೇಂದ್ರಗಳೂ 800 ವೈದ್ಯಕೀಯ ಕೇಂದ್ರಗಳು ಇವೆ.

ಆರ್ಥಿಕತೆ : ಮೊಲ್ಡಾವಿಯವನ್ನು ರಷ್ಯದ ಉದ್ಯಾನವನ ಎಂದು ಕರೆಯಲಾಗುತ್ತದೆ. ದ್ರಾಕ್ಷಿ ಮತ್ತು ಇತರ ಹಣ್ಣಿನ ತೋಟಗಳು ಇಲ್ಲಿ ಹೆಚ್ಚು. ರಷ್ಯದಲ್ಲಿ ಒಟ್ಟು ದ್ರಾಕ್ಷಿ ತೋಟಗಳಲ್ಲಿ 1/4 ಭಾಗಕ್ಕೂ ಹೆಚ್ಚು ಇಲ್ಲಿಯೇ ಇದೆ. ಇಲ್ಲಿಯ ದ್ರಾಕ್ಷಾರಸವನ್ನು ಅತ್ಯುತ್ತಮವಾದುದೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಬೆಳೆಯುವ ಹಣ್ಣುಗಳೆಂದರೆ ಸೇಬು, ಪೇರುಹಣ್ಣು, ಪ್ಲಮ್, ಏಪ್ರಿಕಾಟ್, ಪೀಚ್, ಚೆರ್ರಿ, ಕ್ವಿನ್ಸ್, ಸ್ಟಾಬೆರಿ ಮತ್ತು ವಾಲ್ನಟ್. ಪ್ರಮುಖ ಬೆಳೆಗಳು : ಗೋದಿ, ಮುಸುಕಿನ ಜೋಳ, ಮೆಲನ್ ಮತ್ತು ಆಲೂಗೆಡ್ಡೆ. ವಾಣಿಜ್ಯ ಬೆಳೆಗಳು : ಸೂರ್ಯಕಾಂತಿ, ಸೋಯಾಬಿನ್ಸ್, ಷುಗರ್ ಬೀಟ್, ಹೊಗೆಸೊಪ್ಪು, ಮತ್ತು ತರಕಾರಿಗಳು. ಬೆಸ್ಸರಾಬಿಯದ ದಕ್ಷಿಣಭಾಗದಲ್ಲಿ ಮೀನುಗಾರಿಕೆ ಪ್ರಮುಖ ಉದ್ಯಮ. ಪಶುಪಾಲನೆ ಸಾಕಷ್ಟು ಅಭಿವೃದ್ಧಿಯಾಗಿಲ್ಲ. ಇಲ್ಲಿಯ ಮತ್ತೊಂದು ಪ್ರಮುಖ ಉದ್ಯಮ ಜೇನು ಸಾಕಣೆ. ಪ್ರಮುಖ ಕೈಗಾರಿಕೆಗಳು : ಆಹಾರ ಪದಾರ್ಥಗಳ ಸಂಸ್ಕರಣ, ದ್ರಾಕ್ಷಾರಸ ತಯಾರಿಕೆ, ಪಾದರಕ್ಷೆಗಳು, ಬಟ್ಟೆ, ಕಟ್ಟಡ ತಯಾರಿಕೆಯ ವಸ್ತುಗಳು ಇತ್ಯಾದಿ. ಇಲ್ಲಿ ದೊರೆಯುವ ಪ್ರಮುಖ ಖನಿಜಗಳು ಲಿಗ್ನೇಟ್, ಫಾಸ್ಪೊರೈಟ್ಸ್, ಜಿಪ್ಸ್‍ಂ.

ಇತಿಹಾಸ : ಮೊಲ್ಡಾವಿಯ ಹಾಗೂ ಬೆಸ್ಸರಾಬಿಯಗಳಿಗೆ ದೀರ್ಘಕಾಲದ ಇತಿಹಾಸವಿದೆ. ಕ್ರಿ.ಪೂ. ಮೊದಲ ಸಾವಿರ ವರ್ಷಗಳಲ್ಲಿ ಇದು ಸಿಥಿಯದ ಭಾಗವಾಗಿತ್ತು. ಅನಂತರ ಇದು ಡಾಸಿಯದ ಭಾಗವಾಗಿ ರೋಮನ್ ಸಾಮ್ರಾಜ್ಯದ ಅಧೀನವಾಯಿತು. ಇದು ಯುರೋಪಿಗೆ ಹೋಗುವ ಹೆದ್ದಾರಿಯಮೇಲೆ ಇದ್ದುದರಿಂದ ಕಾಡು ಜನಗಳ ದಾಳಿಗೆ ಪದೇ ಪದೇ ತುತ್ತಾಗಬೇಕಾಯಿತು. ಕ್ರಿ.ಶ. 10-12 ನೆಯ ಶತಮಾನಗಳಲ್ಲಿ ಇದರ ಕೆಲವು ಭಾಗ ಕೀವಿಯನ್ ರಷ್ಯದ ಅಧೀನಕ್ಕೆ ಬಂದು ಅನಂತರ ಗಾಲ್ಸ್ ದೊರೆಗಳ ವಶವಾಯಿತು. 1240 ರಿಂದ 14 ನೆಯ ಶತಮಾನದ ತನಕ ಮೊಲ್ಡಾವಿಯ ಟಾರ್ಟಾರರ ಸಾಮಂತ ರಾಜ್ಯವಾಗಿತ್ತು. ಅನಂತರ ಸ್ವಲ್ಪ ಕಾಲದ ತನಕ ಹಂಗೇರಿಯದ ಅಧೀನದಲ್ಲಿದ್ದು ಬೋಗ್ಡಾನ್‍ನ ಕೆಳಗೆ ಸ್ವತಂತ್ರ ರಾಜ್ಯವಾಯಿತು. ಬೋಗ್ಡಾನ್‍ನ ಉತ್ತರಾಧಿಕಾರಿ 1457 ರಿಂದ 1504ರ ತನಕ ಆಳಿದ ಸ್ಟೀಫನ್ ದಿ ಗ್ರೇಟ್ ತುರ್ಕಿ ಇದನ್ನು ವಶಪಡಿಸಿಕೊಳ್ಳುವುದನ್ನು ತಡೆಗಟ್ಟಿದ. ಅವನ ಮರಣಾನಂತರ ಮೊಲ್ಡಾವಿಯ ತುರ್ಕಿಯ ವಶವಾಯಿತು. ಮುಂದೆ 300 ವರ್ಷಗಳ ಕಾಲ ಇದು ತುರ್ಕಿಯ ಆಯಕಟ್ಟಿನ ಗಡಿರಾಜ್ಯವಾಗಿತ್ತು. 1792 ರ ಜಸ್ಸಿ ಒಪ್ಪಂದದ ಬಳಿಕ ಮೊಲ್ಡಾವಿಯದ ಪೂರ್ವಭಾಗ ರಷ್ಯಕ್ಕೆ ಸೇರಿತು. ಆದರೆ 1812 ರ ಬುಕಾರೆಸ್ಟ್ ಒಪ್ಪಂದದ ಮೇರೆಗೆ ಮೊಲ್ಡಾವಿಯದ ಎಲ್ಲ ಭಾಗಗಳೂ ರಷ್ಯಕ್ಕೆ ಸೇರಿದವು.

	1918ರ ಕ್ರಾಂತಿಯ ಅನಂತರ ಮೊಲ್ಡಾವಿಯ ರೂಮೇನೀಯದೊಂದಿಗೆ ಸೇರಿತು. 1940 ರಲ್ಲಿ ರೂಮೇನೀಯ ಬೆಸ್ಸರಾಬಿಯನ್ನು ಸೋವಿಯತ್ ರಷ್ಯ ಒಕ್ಕೂಟಕ್ಕೆ ಬಿಟ್ಟುಕೊಟ್ಟಿತು.
											 (ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ